ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು! 'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಚಂದನ್ ಶೆಟ್ಟಿ ಅತ್ಯಂತ ಆತ್ಮೀಯ ಗೆಳೆಯ. 'ದೊಡ್ಮನೆ'ಯಲ್ಲಿ ಕುಚಿಕು ಗೆಳೆಯರಂತೆ ಇರುವ ಇವರಿಬ್ಬರು ನಿನ್ನೆಯ 'ಬಲೂನ್' ಟಾಸ್ಕ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ. ಎದುರಾಳಿ ತಂಡದಲ್ಲಿ ಇದ್ದ ದಿವಾಕರ್ ರವರ ಬಲೂನ್ ನಾಶ ಮಾಡುವ ಭರದಲ್ಲಿ, ದಿವಾಕರ್ ಟಿ-ಶರ್ಟ್ ನ ಹಿಡಿದು ಎಳೆದು ಹರಿದರು ಚಂದನ್ ಶೆಟ್ಟಿ. ತಮ್ಮ ಟಿ-ಶರ್ಟ್ ನ ಹರಿದ ಸಿಟ್ಟಿಗೆ ಚಂದನ್ ಶೆಟ್ಟಿ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದರು. ಅಲ್ಲಿಗೆ, ಇಬ್ಬರ ನಡುವಿನ ಗೆಳೆತನಕ್ಕೆ ತಿಲಾಂಜಲಿ ಬಿತ್ತು ಎಂದುಕೊಳ್ಳುವಾಗಲೇ, ದಿವಾಕರ್ ಹಾಗೂ ಚಂದನ್ ಶೆಟ್ಟಿ ಶಾಂತವಾದರು. ಒಬ್ಬರನ್ನೊಬ್ಬರು ಕ್ಷಮಿಸಿದರು.ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ, ಸದಸ್ಯರನ್ನ ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ತಮ್ಮ ತಂಡದ ಸದಸ್ಯರು ಬಲೂನ್ ಗಳನ್ನು ಊದಿ ಎದುರಾಳಿ ತಂಡದ ಬೋರ್ಡ್ ಮೇಲೆ ಅಂಟಿಸಬೇಕಿತ್ತು. ಜೊತೆಗೆ ತಮ್ಮ ತಂಡದ ಬಲೂನ್ ಗಳನ್ನ ಎದುರಾಳಿ ತಂಡದಿಂದ ಕಾಪಾಡಿಕೊಳ್ಳಬೇಕಿತ್ತು. ಯಾವ ತಂಡ ಅತಿ ಹೆಚ್ಚು ಬಲೂನ್ ಊದಿ ಬೋರ್ಡ್ ಮೇಲೆ ಅಂಟಿಸುತ್ತಾರೋ, ಆ ತಂಡ ವಿಜಯಶಾಲಿ ಆಗುತ್ತಿತ್ತು.